ಫರ್ಡಿನೆಂಡ್

 	ಯೂರೋಪಿನಲ್ಲಿ ಆಳಿದ ಈ ಹೆಸರಿನ ಚಕ್ರವರ್ತಿಗಳೂ ದೊರೆಗಳೂ ಹಲವರು. ಮುಖ್ಯರಾದ ಕೆಲವರನ್ನು ಕುರಿತ ವಿವರ ಇಲ್ಲಿದೆ.

	1 ಆಸ್ಟ್ರಿಯದ ಫರ್ಡಿನೆಂಡ್ 1 : 1793-1875 ಆಸ್ಟ್ರಿಯದ ಚಕ್ರವರ್ತಿ. ವಿಯೆನ್ನದಲ್ಲಿ 1793 ಏಪ್ರಿಲ್ 19ರಂದು ಜನನ, ಪ್ರಾಗ್‍ನಲ್ಲಿ 1875 ಜೂನ್ 29ರಂದು ಮರಣ. ತಂದೆ 1ನೆಯ ಫ್ರಾನ್ಸಿಸ್-ಫರ್ಡಿನೆಡ್, 1835ರಲ್ಲಿ ಸಿಂಹಾಸನ ಏರಿದ. ಆಗ ಮಂತ್ರಿಯಾಗಿದ್ದ ಮೆಟರ್‍ನಿಕ್ ಪ್ರಬಲನಾಗಿದ್ದ. ಆ ಮೊದಲು ಇದ್ದಂತೆ ನಿರಂಕುಶ ಆಡಳಿತವೇ ಮುಂದುವರಿಯಿತು. 1847-48ರಲ್ಲಿ ಕ್ರಾಂತಿ ಸಂಭವಿಸಿತು, ಫರ್ಡಿನೆಂಡ್ ಕ್ರಾಂತಿವಾದಿಗಳಿಗೆ ಮಣಿದು ಮೆಟರ್‍ನಿಕ್‍ನನ್ನು ಅಧಿಕಾರದಿಂದ ತೆಗೆದುಹಾಕಿ, ಹೊಣೆಗಾರ ಮಂತ್ರಿಮಂಡಲವನ್ನು ನೇಮಿಸಿದನಲ್ಲದೆ ಸ್ಥೂಲವಾದ ಸಂವಿಧಾನವನ್ನೂ ಜಾರಿಗೆ ತಂದ. ಆದಾಗ್ಯೂ ಜನಕ್ಕೆ ತೃಪ್ತಿ ಆಗಲಿಲ್ಲ. ವಿಯೆನ್ನದಲ್ಲಿ ಮತ್ತೆ ಬಂಡಾಯ ಸಂಭವಿಸಿತು. ಆಗ ಫರ್ಡಿನೆಂಡ್ ತನ್ನ ಸೋದರನ ಮಗನಾದ 1ನೆಯ ಫಾನ್ಸಿಸ್ ಜೋಸೆಫ್‍ನಿಗೆ ರಾಜ್ಯವನ್ನೊಪ್ಪಿಸಿಕೊಟ್ಟು ಪ್ರಾಗಿಗೆ ಹೋಗಿ ನೆಲಸಿದ. ಅಲ್ಲೇ ತೀರಿಕೊಂಡ.

	2 ಬಲ್ಗೇರಿಯದ ಫರ್ಡಿನೆಂಡ್ 1; 1861-1948. ವಿಯೆನ್ನದಲ್ಲಿ 1861 ಫೆಬ್ರುವರಿ 26ರಂದು ಜನನ. ಸ್ಯಾಕ್ ಕೊಬರ್ಗ್‍ನ ಆಗಸ್ಟಸ್ ರಾಜಕುಮಾರನ ಕಿರಿಯ ಮಗ. ಆಸ್ಟ್ರಿಯನ್ ಸೇನೆಯಲ್ಲಿ ಸೇವೆ ಸಲ್ಲಿಸಿದ. ಬಲ್ಗೇರಿಯದ ರಾಜಕುಮಾರ ಅಲೆಗ್ಸಾಂಡರ್ ಸಿಂಹಾಸನವನ್ನು ತೊರೆದಾಗ ಫರ್ಡಿನೆಂಡನಿಗೆ ಕಿರೀಟಧಾರಣೆಯ ಯೋಗ ಪ್ರಾಪ್ತವಾಗಿ ಈತ ದೊರೆಯಾದ (1887). 1908ರಲ್ಲಿ ಬಲ್ಗೇರಿಯ ಸ್ವತಂತ್ರವೆಂದು ಘೋಷಿಸಿದ. ತುರ್ಕಿಯ ವಿರುದ್ಧ ಸಂಘಟಿತವಾದ ಬಾಲ್ಕನ್ ಲೀಗಿಗೆ 1912ರಲ್ಲಿ ಸೇರಿದ. ಕೆಲವು ಪ್ರದೇಶಗಳು ಬಲ್ಗೇರಿಯಕ್ಕೆ ದೊರಕಿದುವು. ಆದರೆ ಲೀಗಿನೊಂದಿಗೆ ಬಲ್ಗೇರಿಯಾದ ಸಂಬಂಧ ಹೆಚ್ಚುಕಾಲ ಮುಂದುವರಿಯಲಿಲ್ಲ. ಆಗ ಕೆಲವು ಪ್ರದೇಶಗಳು ಕೈಬಿಟ್ಟು ಹೋದುವು (1913). ಒಂದನೆಯ ಮಹಾಯದ್ಧದಲ್ಲಿ ಜರ್ಮನಿಯ ಜೊತೆಗೂಡಿ ಸರ್ಬಿಯದ ಮೇಲೆ ಆಕ್ರಮಣ ನಡೆಸಿದ (1915). ಇವನ ಸೇನೆ ಮಹಾ ಪರಾಭವವನ್ನೆದುರಿಸಿತು. 1918 ಅಕ್ಟೋಬರಿನಲ್ಲಿ ಸಿಂಹಾಸನ ತ್ಯಾಗ ಮಾಡಿದ. ಇವನ ಮಗ 3ನೆಯ ಬೋರಿಸ್ ದೊರೆಯಾದ.

	3 ಪವಿತ್ರ ರೋಮನ್ ಚಕ್ರವರ್ತಿಗಳು: ಫರ್ಡಿನೆಂಡ್ 1: 1503-1564. ಸ್ಪೇನಿನಲ್ಲಿ ಹುಟ್ಟಿದ 1ನೆಯ ಫಿಲಿಪನ ಮಗ. ಸೋದರ 5ನೆಯ ಚಾಲ್ರ್ಸನ ಅನಂತರ ಅಧಿಕಾರಕ್ಕೆ ಬಂದ (1556). 1521ರಲ್ಲಿ ಬೊಹಿಮಿಯ ಹಂಗೇರಿಗಳ ದೊರೆಯ ಮಗಳನ್ನು ಮದುವೆಯಾಗಿದ್ದ. ಆಕೆಯ ಸೋದರ 1526ರಲ್ಲಿ ತೀರಿಕೊಂಡ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಹಂಗೆರಿ ಬೊಹಿಮಿಯಗಳ ಸಿಂಹಾಸನ ತನಗೇ ಸೇರಬೇಕೆಂದು ಫರ್ಡಿನೆಂಡ್ ತಕರಾರು ಹೂಡಿದ ತುರ್ಕರಿಗೆ ಹಣಕೊಟ್ಟು ಅವೆರಡು ಪ್ರದೇಶಗಳ ಮೇಲೂ ಅಧಿಕಾರ ದಕ್ಕಿಸಿಕೊಂಡ. ಇವನ ಅನಂತರ ಇವನ ಮಗ 2ನೆಯ ಮಾಕ್ಸಿಮಿಲಿಯನ್ ಪಟ್ಟಕ್ಕೆ ಬಂದ.

	ಫರ್ಡಿನೆಂಡ್ I. 1578-1637. 1ನೆಯ ಫರ್ಡಿನೆಂಡನ ಮೊಮ್ಮಗ. 1819ರಲ್ಲಿ ಪಟ್ಟಕ್ಕೆ ಬಂದ. ಇವನು ಪ್ರಾಟೆಸ್ಟಂಟರನ್ನು ದಮನಮಾಡಲು ಯತ್ನಿಸಿದ. ಮೂವತ್ತು ವರ್ಷಗಳ ಯುದ್ಧ ಆರಂಭವಾಯಿತು. ಪ್ರಾಟೆಸ್ಟೆಂಟರು ತಮ್ಮ ಕಳೆದುಹೋದ ಅಧಿಕಾರವನ್ನು ಮರುಗಳಿಸಲು ಬಹಳ ಕಾಲ ಹೊಡೆದಾಡಿದರು. ದೇಶದಲ್ಲಿ ನಾನಾ ಬಗೆಯ ಸಂಚುಗಳೂ ಪ್ರತಿ ಸಂಚುಗಳು ಆದುವು. ಕೊನೆಗೆ ಪ್ರಾಟೆಸ್ಟಂಟರು ವಿಜಯ ಸಾಧಿಸಿದರು. ಫರ್ಡಿನೆಂಡ್ 1637ರಲ್ಲಿ ತೀರಿಕೊಂಡ.

	ಫರ್ಡಿನೆಂಡ್ III. 1608-57. 2ನೆಯ ಫರ್ಡಿನೆಂಡನ ಮಗ. ಇವನು ಜೆಸೊಯಿಟರ ಪ್ರಭಾವಕ್ಕೆ ಅಷ್ಟೇನೂ ಒಳಗಾಗಿರಲಿಲ್ಲ, ಶಾಂತಿಪಾಲನೆಯೇ ಇವನ ಧ್ಯೇಯ. ಆದಾಗ್ಯೂ ಹಲವುಕಾಲ ಇದು ಸಾಧಿಸಲಿಲ್ಲ. 1648ರಲ್ಲಿ ಮನ್ಸ್‍ಟರ್‍ನಲ್ಲಿ ಸೇರಿದ್ದ ಸಮ್ಮೇಳನದಲ್ಲಿ ಎರಡೂ ಬಣಗಳ ನಡುವೆ ಒಪ್ಪಂದವಾಯಿತು. ವೆಸ್ಟ್‍ಫೆಲಿಯಾ ಒಪ್ಪಂದವೆಂದು ಇದು ಹೆಸರಾಗಿದೆ. ಮತೀಯ ಹಿಂಸೆ ಕೊನೆಗೊಂಡಿತು.

	4 ಎರಡು ಸಿಸಿಲಿಗಳ ಇಬ್ಬರು ದೊರೆಗಳು. ಫರ್ಡಿನೆಂಡ್ 1: 1751-1825. ಸ್ಪೇನಿನ 3ನೆಯ ಚಾಲ್ರ್ಸ್‍ನ ಮಗ, ಚಾಲ್ರ್ಸ್ 1759ರಲ್ಲಿ ಸ್ಪೇನಿನ ಸಿಂಹಾಸನವೇರಿದಾಗ ಫರ್ಡಿನೆಂಡ್ ನೇಪಲ್ಸಿನಲ್ಲಿ ಅವನ ಉತ್ತರಾಧಿಕಾರಿಯಾದ. 14ನೆಯ ಲೂಯಿಯ ಮರಣಾನಂತರ ಫ್ರಾನ್ಸಿನ ವಿರುದ್ಧ ನಡೆದ ಯುದ್ಧದಲ್ಲಿ (1793-96) ಭಾಗವಹಿಸಿದ. ನೆಪೋಲಿಯನ್ನನ ಕಾಲದಲ್ಲಿ ಸಿಂಹಾಸನ ಕಳೆದುಕೊಂಡ. ಆದರೆ ನೆಪೋಲಿಯನ್ನನ ಅನಂತರ 1814ರಲ್ಲಿ ವಿಯನ್ನ ಕಾಂಗ್ರೆಸ್ ಫರ್ಡಿನೆಂಡನನ್ನು ಎರಡು ಸಿಸಿಲಿಗಳ ರಾಜನಾಗಿ ನೇಮಿಸಿತು. ಜನಾಭಿಪ್ರಾಯಕ್ಕೆ ಮಣಿದು ಇವನು ಸಂವಿಧಾನಾತ್ಮಕ ಆಡಳಿತವನ್ನು ಜಾರಿಗೆ ತಂದ. ಆದರೆ ಸ್ವಲ್ಪ ಕಾಲದ ಮೇಲೆ ಅದನ್ನು ರದ್ದುಮಾಡಿ ಸರ್ವಾಧಿಕಾರಿಯಂತೆ ಆಳ್ವಿಕೆ ನಡೆಸಿದ.

	ಫರ್ಡಿನೆಂಡ್ 11: 1810-59. 1ನೆಯ ಫ್ರಾನ್ಸಿಸನ ಮಗ. 1830ರಲ್ಲಿ ತಂದೆ ತೀರಿಕೊಂಡಾಗ ಪಟ್ಟಕ್ಕೆ ಬಂದ. ಕ್ರಮೇಣ ಇವನೂ ನಿರಂಕುಶ ದೊರೆಯಾದ. ತನ್ನ ಮಾತೇ ಕಾನೂನು ಎಂಬಂತೆ ವರ್ತಿಸಿದ. ಎದುರು ಬಿದ್ದವರನ್ನು ಕ್ರೂರವಾಗಿ ಶಿಕ್ಷಿಸಿದ, ಸೆರೆಮನೆಗೆ ಅಟ್ಟಿದ. 1848ರ ಕ್ರಾಂತಿಯ ಕಾಲದಲ್ಲೂ ಪ್ರತಿಗಾಮಿ ನೀತಿಯನ್ನೇ ಅನುಸರಿಸಿದ. 15,000 ರಾಜಕೀಯ ಕೈದಿಗಳನ್ನು ಸೆರೆಮನೆಯಲ್ಲಿಟ್ಟು ಕ್ರೂರವಾಗಿ ನಡೆದುಕೊಂಡ. ಬ್ರಿಟನ್ ಮತ್ತು ಫ್ರಾನ್ಸ್ ಇವನನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದಾಗ, ಆ ದೇಶಗಳು ಆಂತರಿಕ ವ್ಯವಹಾರಗಳಲ್ಲಿ ಕೈಹಾಕುತ್ತಿವೆ ಎಂದು ಕೂಗು ಎಬ್ಬಿಸಿದ. ಆಗ ನೇಪಲ್ಸಿನಿಂದ ಈ ದೇಶಗಳು ತಮ್ಮ ರಾಯಭಾರಿಗಳನ್ನು ವಾಪಸ್ಸು ಕರೆಸಿಕೊಂಡು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದುವು. ಇದರಿಂದ ಫರ್ಡಿನೆಂಡ್‍ನ ನಿರಂಕುಶ ಅಧಿಕಾರ ಮತ್ತಷ್ಟು ಹೆಚ್ಚುವಂತಾಯಿತು. ಇವನ ಕೊನೆಗಾಲದಲ್ಲಿ ರಾಜ್ಯ ತುಂಬಾ ನೆಲೆಗೆಟ್ಟಿತ್ತು.					(ಎನ್.ಕೆ.ಎಸ್.)  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ